ರಂಗಭೂಮಿ ವಿಷಯವನ್ನೇ ಪದವಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಜಿ ಎನ್ ಮೋಹನ್ ಅವರು ಪ್ರಥಮ Rank ಮತ್ತು ಎರಡು ಸ್ವರ್ಣ ಪದಕಗಳೊಂದಿಗೆ ಪದವಿ ಗಳಿಸಿದರು. ಬಾಲ್ಯದಲ್ಲಿಯೆ ರಂಗದ ಕಡೆಗೆ ಆಕರ್ಷಿತರಾದ ಇವರು ಖ್ಯಾತ ನಿರ್ದೇಶಕರಾದ ಎನ್ ಎಸ್ ವೆಂಕಟರಾಮ್, ಬಿ ಜಯಶ್ರೀ ಗರಡಿಯಲ್ಲಿ ಪಳಗಿದರು. ಬಾಲಭವನದ ಮೂಲಕ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಖ್ಯಾತ ನಿರ್ದೇಶಕ ಎಂ ವಿ ಸುಬ್ಬಣ್ಣ ಇವರ ಹೈಸ್ಕೂಲ್ ದಿನಗಳಲ್ಲಿ ರಂಗ ಪ್ರೀತಿಗೆ ನೀರೆರೆದರು. ಸಮುದಾಯ ರಂಗ ತಂಡವು ಸಿಜಿಕೆ ಮತ್ತು ಪ್ರಸನ್ನರ ನೇತೃತ್ವದಲ್ಲಿ ಆರಂಭಿಸಿದ ಸಾಂಸ್ಕೃತಿಕ ಜಾಥಾದಿಂದ ಪ್ರಭಾವಿತರಾಗಿ ರಂಗ ಚಳವಳಿಯ ಜೊತೆ ಗುರುತಿಸಿಕೊಂಡರು. ಎರಡನೆಯ ಜಾಥಾದಲ್ಲಿ ಭಾಗವಹಿಸಿ ಬೆಂಗಳೂರಿನ ಮೂಲೆ ಮೂಲೆಯ ಗ್ರಾಮಗಳಲ್ಲಿ ನಾಟಕದಲ್ಲಿ ಅಭಿನಯಿಸಿದರು. ಎಸ್ ಮಾಲತಿ, ಸಿ ಜಿ ಕೃಷ್ಣಸ್ವಾಮಿ ನಿರ್ದೇಶನದ ನಾಟಕಗಳಲ್ಲಿ ಇವರು ಪ್ರಧಾನ ಪಾತ್ರ ವಹಿಸಿದರು. ಇದು ಮುಂದುವರೆದು ಪದವಿ ತರಗತಿಯಲ್ಲಿರುವಾಗಲೇ ಎಮ್ ಇ ಎಸ್ ಸಂಜೆ ಕಾಲೇಜಿಗೆ ಕತ್ತಲೆ ರಾಜ್ಯ ನಾಟಕ ನಿರ್ದೇಶಿಸಿ ಪ್ರಥಮ ಪ್ರಶಸ್ತಿ ಗಳಿಸಿದರು. ಪದವಿ ಭಾಗವಾಗಿ ಎಂ ವ್ಯಾಸರ ಬೇರು ಕಥೆಯನ್ನು ರಂಗಕ್ಕೆ ಅಳವಡಿಸಿದರು.
ರಂಗ ವಿಮರ್ಶೆಗೆ ಜಿ ಎನ್ ಮೋಹನ್ ಕೊಟ್ಟ ಕೊಡುಗೆ ಅಪಾರ. ನೀನಾಸಂ ನ ತಿರುಗಾಟ, ಸಮುದಾಯದ ಸಾಂಸ್ಕೃತಿಕ ಉತ್ಸವಗಳು, ಬೆಂಗಳೂರಿನಲ್ಲಿ ಜರುಗಿದ ಬಹುತೇಕ ನಾಟಕಗಳ ವಿಮರ್ಶೆಯನ್ನು ಇವರು ಮಾಡಿದ್ದಾರೆ. ಮಾಧ್ಯಮ ಜಗತ್ತಿಗೆ ಕಾಲಿಟ್ಟ ಮೇಲೆ ರಂಗಭೂಮಿಯ ನಂಟನ್ನು ಉಳಿಸಿಕೊಂಡೇ ಬಂದಿದ್ದಾರೆ ಇಂದಿಗೂ ಕಲಾಕ್ಷೇತ್ರ, ಕೆ ಎಚ್ ಕಲಾಸೌಧ, ರಂಗಶಂಕರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಪತ್ರಿಕೋದ್ಯಮದ ಕೆಲವೇ ಕೆಲವರಲ್ಲಿ ಜಿ ಎನ್ ಮೋಹನ್ ಸಹ ಒಬ್ಬರು.
ಬೀದಿ ನಾಟಕಗಳ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಮೊದಲಬಾರಿಗೆ ಬೀದಿನಾಟಕಗಳ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಇವರ ’ಸಮೂಹದಿಂದ ಸಮೂಹಕ್ಕೆ ಬೀದಿ ನಾಟಕ’ ಪುಸ್ತಕ ಈ ದಿಸೆಯಲ್ಲಿ ಕನ್ನಡದ ಮೊದಲ ಪುಸ್ತಕ. ಈ ಪುಸ್ತಕದ ಬಗ್ಗೆ ಮಾತನಾಡುತ್ತಾ ಪುರುಷೋತ್ತಮ ಬಿಳಿಮಲೆ ಅವರು, “ಬೀದಿ ರಂಗ ಪ್ರಕಾರದ ಬಗೆಗೆ ಏನೇನೂ ಮಾಹಿತಿಗಳು ಇಲ್ಲದೇ ಇದ್ದಾಗ ಮೋಹನರು ಇಷ್ಟು ವಿಷಯಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಕೃತಿಗೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ“ ಎಂದು ಬರೆದಿದ್ದಾರೆ.ಪ್ರಜಾವಾಣಿಯಲ್ಲಿ
ನಂತರ ಈಟಿವಿಯ ಮುಖ್ಯಸ್ಥರಾಗಿದ್ದಾಗ ಸಹ ಕರ್ನಾಟಕದ ರಂಗ ಚಟುವಟಿಕೆಗಳಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೇದಿಕೆ ಒದಗಿಸಿದವರು. ರಾಜಕೀಯ ಸುದ್ದಿಗಳ ತಲೆಬರಹದ ನಡುವೆ ಸಹ ರಂಗಭೂಮಿಯ ಕದಲಿಕೆಗಳನ್ನು ದಾಖಲುಗೊಳಿಸಿದ್ದರು. ಅಲ್ಲಿ ರಂಗ ಪುಸ್ತಕ ಭಂಡಾರ ಸ್ಥಾಪಿಸಿ ರಂಗಭೂಮಿಯ ಬಗ್ಗೆ ಗಂಭೀರ ಅಧ್ಯಯನವನ್ನು ಸಾಧ್ಯವಾಗಿಸಿದ್ದರು. ಇನ್ನು ಇವರು ಪ್ರಧಾನ ಸಂಪಾದಕರಾಗಿದ್ದ 'ಅವಧಿ' ಅಂತರ್ಜಾಲ ಪತ್ರಿಕೆಯಂತೂ ಕರ್ನಾಟಕದ ಎಲ್ಲಾ ರಂಗಚಟುವಟಿಕೆಗಳಿಗೆ ಮುಖಪುಟ, ರಿಹರ್ಸಲ್ ನಿಂದ ಹಿಡಿದು, ನಾಟಕದ ಸಿದ್ಧತೆ, ಪ್ರದರ್ಶನ, ಪ್ರದರ್ಶನದ ಚಿತ್ರಗಳು, ವಿಮರ್ಶೆ ಎಲ್ಲಕ್ಕೂ ಅಲ್ಲಿ ಒಂದು ಜಾಗ ಮೀಸಲು. ಅಷ್ಟೇ ಅಲ್ಲ ಮೊದಲ ಬಾರಿ ಒಂದು ವಿದ್ಯುನ್ಮಾನ ವಾಹಿನಿಯಿಂದ ನೀನಾಸಂ ರಸಗ್ರಹಣ ಶಿಬಿರಕ್ಕೆ ಶಿಭಿರಾರ್ಥಿಗಳನ್ನು ಕಳುಹಿಸಿ ಸಂಸ್ಕೃತಿಯ ರಸಗ್ರಹಣವೂ ಮಾಧ್ಯಮದ ಭಾಗವೇ ಎಂದು ಪ್ರತಿಪಾದಿಸಿದವರು.
ಸಿಜಿಕೆ, ಕೆ ವಿ ಸುಬ್ಬಣ್ಣ ಮೊದಲಾದ ರಂಗ ಚೇತನಗಳ ಶುಭಾಶಯ ಕಾರ್ಡ್ ಗಳನ್ನು ತಯಾರಿಸಿ, ವಿತರಿಸಿದ್ದು ಇವರ ರಂಗಪ್ರೇಮಕ್ಕೆ ಒಂದು ಉದಾಹರಣೆ ಮಾತ್ರ. ಇಷ್ಟೇ ಅಲ್ಲದೆ ರಂಗಭೂಮಿಯ ಬಗ್ಗೆ ಇವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಮತ್ತು ಕೈಪಿಡಿಗಳಲ್ಲಿ ಪ್ರಕಟವಾಗಿದೆ.
https://www.facebook.com/pages/Kannada-Rangabhoomi
No comments:
Post a Comment