Friday, 12 December 2014

ಪ್ರದರ್ಶನಗಳು.....

                                                                
 ದಿನಾಂಕ 13-12-2014 ಶನಿವಾರ
ಸ್ಪಂದನ(ರಿ) ಬೆಳಲಕಟ್ಟೆ ಕಲಾತಂಡ ಅಭಿನಯದ ಡಾ. ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿತ ನಾಟಕ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ'
ನಿರ್ದೇಶನ: ಅಜಯ್ ಗೌಡ ನೀನಾಸಂ
ಸ್ಥಳ: ಸುವರ್ಣ ಸಂಸ್ಕ್ರತಿ ಭವನ, ಶಿವಮೊಗ್ಗ. ಸಂಜೆ 6.30ಕ್ಕೆ
ಪ್ರವೇಶ ಉಚಿತ













ಹೊಂಗಿರಣ(ರಿ) ಶಿವಮೊಗ್ಗ ಅರ್ಪಿಸುವ ಕಲಾ ಗಂಗೋತ್ರಿ, ಬೆಂಗಳೂರು ಕಲಾತಂಡ ಅಭಿನಯದ "ಮೈಸೂರು ಮಲ್ಲಿಗೆ"
ನಿರ್ದೇಶನ: ಡಾ. ಬಿ.ವಿ.ರಾಜಾರಾಂ
ದಿನಾಂಕ: 14-12-2014 ಭಾನುವಾರ
ಸ್ಥಳ: ಸುವರ್ಣ ಸಂಸ್ಕ್ರತಿ ಭವನ, ಶಿವಮೊಗ್ಗ. ಸಂಜೆ 6.30ಕ್ಕೆ
ಟಿಕೆಟ್ ದರ- 30/- ಮಾತ್ರ



ಶರೀಫ.....


ಏಕತಾರಿ, ಮೈಸೂರು ಕಲಾ ತಂಡ ಅಭಿನಯಿಸುತ್ತಿರುವ ಮಂಜುನಾಥ ಬೆಳೆಕೆರೆ ರವರ 'ಶರೀಫ' ನಾಟಕ
ನಿರ್ದೇಶನ: ದಿನೇಶ್ ಚಿಮ್ಮಾರಿಗೆ ನೀನಾಸಂ
ದಿನಾಂಕ: 14-12-2014, ಭಾನುವಾರ
ಸ್ಥಳ: ಕಲಾಮಂದಿರ, ಮೈಸೂರು

"ಸಕಲಕಲಾವಲ್ಲಭ"

ರವಿಶಂಕರ್ ರವರೊಂದಿಗೆ ಪದ್ಮಾ ಶಿವಮೊಗ್ಗ.......

ಸಂಗ್ರಹ: ವಿಜಯ ಕರ್ನಾಟಕ ದಿನ ಪತ್ರಿಕೆ...

ಮಕ್ಕಳೊಂದಿಗೆ ರಂಗ ಪಯಣ....ಡಾ. ಶ್ರೀಪಾದ ಭಟ್

ಡಾ. ಶ್ರೀಪಾದ ಭಟ್ ರವರ ಕೆಲವು ಸಿಹಿ ನೆನಪುಗಳು....

ಸಂಗ್ರಹ: ಪ್ರಜಾವಾಣಿ ದಿನ ಪತ್ರಿಕೆ....

Wednesday, 10 December 2014

ಜಿ.ಎನ್.ಮೋಹನ್: ‘ಸಂಸ ರಂಗ- ಮಾಧ್ಯಮ ಪುರಸ್ಕಾರ-2014’

ರಂಗಭೂಮಿ ವಿಷಯವನ್ನೇ ಪದವಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಜಿ ಎನ್ ಮೋಹನ್ ಅವರು ಪ್ರಥಮ Rank ಮತ್ತು ಎರಡು ಸ್ವರ್ಣ ಪದಕಗಳೊಂದಿಗೆ ಪದವಿ ಗಳಿಸಿದರು. ಬಾಲ್ಯದಲ್ಲಿಯೆ ರಂಗದ ಕಡೆಗೆ ಆಕರ್ಷಿತರಾದ ಇವರು ಖ್ಯಾತ ನಿರ್ದೇಶಕರಾದ ಎನ್ ಎಸ್ ವೆಂಕಟರಾಮ್, ಬಿ ಜಯಶ್ರೀ ಗರಡಿಯಲ್ಲಿ ಪಳಗಿದರು. ಬಾಲಭವನದ ಮೂಲಕ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಖ್ಯಾತ ನಿರ್ದೇಶಕ ಎಂ ವಿ ಸುಬ್ಬಣ್ಣ ಇವರ ಹೈಸ್ಕೂಲ್ ದಿನಗಳಲ್ಲಿ ರಂಗ ಪ್ರೀತಿಗೆ ನೀರೆರೆದರು. 
ಸಮುದಾಯ ರಂಗ ತಂಡವು ಸಿಜಿಕೆ ಮತ್ತು ಪ್ರಸನ್ನರ ನೇತೃತ್ವದಲ್ಲಿ ಆರಂಭಿಸಿದ ಸಾಂಸ್ಕೃತಿಕ ಜಾಥಾದಿಂದ ಪ್ರಭಾವಿತರಾಗಿ ರಂಗ ಚಳವಳಿಯ ಜೊತೆ ಗುರುತಿಸಿಕೊಂಡರು. ಎರಡನೆಯ ಜಾಥಾದಲ್ಲಿ ಭಾಗವಹಿಸಿ ಬೆಂಗಳೂರಿನ ಮೂಲೆ ಮೂಲೆಯ ಗ್ರಾಮಗಳಲ್ಲಿ ನಾಟಕದಲ್ಲಿ ಅಭಿನಯಿಸಿದರು. ಎಸ್ ಮಾಲತಿ, ಸಿ ಜಿ ಕೃಷ್ಣಸ್ವಾಮಿ ನಿರ್ದೇಶನದ ನಾಟಕಗಳಲ್ಲಿ ಇವರು ಪ್ರಧಾನ ಪಾತ್ರ ವಹಿಸಿದರು. ಇದು ಮುಂದುವರೆದು ಪದವಿ ತರಗತಿಯಲ್ಲಿರುವಾಗಲೇ ಎಮ್ ಇ ಎಸ್ ಸಂಜೆ ಕಾಲೇಜಿಗೆ ಕತ್ತಲೆ ರಾಜ್ಯ ನಾಟಕ ನಿರ್ದೇಶಿಸಿ ಪ್ರಥಮ ಪ್ರಶಸ್ತಿ ಗಳಿಸಿದರು. ಪದವಿ ಭಾಗವಾಗಿ ಎಂ ವ್ಯಾಸರ ಬೇರು ಕಥೆಯನ್ನು ರಂಗಕ್ಕೆ ಅಳವಡಿಸಿದರು.
ರಂಗ ವಿಮರ್ಶೆಗೆ ಜಿ ಎನ್ ಮೋಹನ್ ಕೊಟ್ಟ ಕೊಡುಗೆ ಅಪಾರ. ನೀನಾಸಂ ನ ತಿರುಗಾಟ, ಸಮುದಾಯದ ಸಾಂಸ್ಕೃತಿಕ ಉತ್ಸವಗಳು, ಬೆಂಗಳೂರಿನಲ್ಲಿ ಜರುಗಿದ ಬಹುತೇಕ ನಾಟಕಗಳ ವಿಮರ್ಶೆಯನ್ನು ಇವರು ಮಾಡಿದ್ದಾರೆ. ಮಾಧ್ಯಮ ಜಗತ್ತಿಗೆ ಕಾಲಿಟ್ಟ ಮೇಲೆ ರಂಗಭೂಮಿಯ ನಂಟನ್ನು ಉಳಿಸಿಕೊಂಡೇ ಬಂದಿದ್ದಾರೆ ಇಂದಿಗೂ ಕಲಾಕ್ಷೇತ್ರ, ಕೆ ಎಚ್ ಕಲಾಸೌಧ, ರಂಗಶಂಕರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಪತ್ರಿಕೋದ್ಯಮದ ಕೆಲವೇ ಕೆಲವರಲ್ಲಿ ಜಿ ಎನ್ ಮೋಹನ್ ಸಹ ಒಬ್ಬರು.
ಬೀದಿ ನಾಟಕಗಳ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಮೊದಲಬಾರಿಗೆ ಬೀದಿನಾಟಕಗಳ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಇವರ ’ಸಮೂಹದಿಂದ ಸಮೂಹಕ್ಕೆ ಬೀದಿ ನಾಟಕ’ ಪುಸ್ತಕ ಈ ದಿಸೆಯಲ್ಲಿ ಕನ್ನಡದ ಮೊದಲ ಪುಸ್ತಕ. ಈ ಪುಸ್ತಕದ ಬಗ್ಗೆ ಮಾತನಾಡುತ್ತಾ ಪುರುಷೋತ್ತಮ ಬಿಳಿಮಲೆ ಅವರು, “ಬೀದಿ ರಂಗ ಪ್ರಕಾರದ ಬಗೆಗೆ ಏನೇನೂ ಮಾಹಿತಿಗಳು ಇಲ್ಲದೇ ಇದ್ದಾಗ ಮೋಹನರು ಇಷ್ಟು ವಿಷಯಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಕೃತಿಗೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ“ ಎಂದು ಬರೆದಿದ್ದಾರೆ.ಪ್ರಜಾವಾಣಿಯಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿದ್ದ ಲಲಿತ ಕಲಾ ಸಂಘದಲ್ಲಿ ತುಂಬು ಚಟುವಟಿಕೆಯಿಂದ ತೊಡಗಿಸಿಕೊಂಡವರು. ಪ್ರಸನ್ನರ ’ತದ್ರೂಪಿ’, ನಿಸರ್ಗಪ್ರಿಯ ಅವರ ’ಬೆನಕನ ಕೆರೆ’ ನಾಟಕದಲ್ಲಿ ಪಾತ್ರ ವಹಿಸಿ ಅದನ್ನು ರಾಜ್ಯದ ಹಲವಾರು ಕಡೆ ಪ್ರದರ್ಶಿಸಿದ್ದಾರೆ. ನಾಟಕ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದರು.
ನಂತರ ಈಟಿವಿಯ ಮುಖ್ಯಸ್ಥರಾಗಿದ್ದಾಗ ಸಹ ಕರ್ನಾಟಕದ ರಂಗ ಚಟುವಟಿಕೆಗಳಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೇದಿಕೆ ಒದಗಿಸಿದವರು. ರಾಜಕೀಯ ಸುದ್ದಿಗಳ ತಲೆಬರಹದ ನಡುವೆ ಸಹ ರಂಗಭೂಮಿಯ ಕದಲಿಕೆಗಳನ್ನು ದಾಖಲುಗೊಳಿಸಿದ್ದರು. ಅಲ್ಲಿ ರಂಗ ಪುಸ್ತಕ ಭಂಡಾರ ಸ್ಥಾಪಿಸಿ ರಂಗಭೂಮಿಯ ಬಗ್ಗೆ ಗಂಭೀರ ಅಧ್ಯಯನವನ್ನು ಸಾಧ್ಯವಾಗಿಸಿದ್ದರು. ಇನ್ನು ಇವರು ಪ್ರಧಾನ ಸಂಪಾದಕರಾಗಿದ್ದ 'ಅವಧಿ' ಅಂತರ್ಜಾಲ ಪತ್ರಿಕೆಯಂತೂ ಕರ್ನಾಟಕದ ಎಲ್ಲಾ ರಂಗಚಟುವಟಿಕೆಗಳಿಗೆ ಮುಖಪುಟ, ರಿಹರ್ಸಲ್ ನಿಂದ ಹಿಡಿದು, ನಾಟಕದ ಸಿದ್ಧತೆ, ಪ್ರದರ್ಶನ, ಪ್ರದರ್ಶನದ ಚಿತ್ರಗಳು, ವಿಮರ್ಶೆ ಎಲ್ಲಕ್ಕೂ ಅಲ್ಲಿ ಒಂದು ಜಾಗ ಮೀಸಲು. ಅಷ್ಟೇ ಅಲ್ಲ ಮೊದಲ ಬಾರಿ ಒಂದು ವಿದ್ಯುನ್ಮಾನ ವಾಹಿನಿಯಿಂದ ನೀನಾಸಂ ರಸಗ್ರಹಣ ಶಿಬಿರಕ್ಕೆ ಶಿಭಿರಾರ್ಥಿಗಳನ್ನು ಕಳುಹಿಸಿ ಸಂಸ್ಕೃತಿಯ ರಸಗ್ರಹಣವೂ ಮಾಧ್ಯಮದ ಭಾಗವೇ ಎಂದು ಪ್ರತಿಪಾದಿಸಿದವರು.
ಸಿಜಿಕೆ, ಕೆ ವಿ ಸುಬ್ಬಣ್ಣ ಮೊದಲಾದ ರಂಗ ಚೇತನಗಳ ಶುಭಾಶಯ ಕಾರ್ಡ್ ಗಳನ್ನು ತಯಾರಿಸಿ, ವಿತರಿಸಿದ್ದು ಇವರ ರಂಗಪ್ರೇಮಕ್ಕೆ ಒಂದು ಉದಾಹರಣೆ ಮಾತ್ರ. ಇಷ್ಟೇ ಅಲ್ಲದೆ ರಂಗಭೂಮಿಯ ಬಗ್ಗೆ ಇವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಮತ್ತು ಕೈಪಿಡಿಗಳಲ್ಲಿ ಪ್ರಕಟವಾಗಿದೆ.

https://www.facebook.com/pages/Kannada-Rangabhoomi

ಡಾ.ಡಿ.ಎಸ್.ಚೌಗಲೆ, ನಾಟಕಕಾರರು: ಸಂಸ ರಂಗ-ಸಾಹಿತ್ಯ ಪುರಸ್ಕಾರ-2014’

          ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ’ಕಸ್ತೂರಬಾ’, ’ಉಧ್ವಸ್ಥ’ ಅವರ ಬಹುಚರ್ಚಿತ ನಾಟಕಗಳು. ’ಉಚಲ್ಯಾ’, ಇತ್ತೀಚೆಗೆ ಬಂದ ರೂಪಾಂತರ ನಾಟಕ. ೧೯೯೮ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ’ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ’ಗಾಂಧಿ-ಅಂಬೇಡ್ಕರ್’, ’ಪೇಯಿಂಗ್ ಗೆಸ್ಟ್’,’ಕಿರುವಂತ’, ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’ ಇವರ ಇತರ ಅನುವಾದಿತ ನಾಟಕಗಳು. ’ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಈಚೆಗೆ ಬಂದ ಕೃತಿ. ’ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’ಇವು ಪ್ರಮುಖ ಅನುವಾದಿತ ಕೃತಿಗಳು.
’ವಾರಸಾ’, ’ಒಡಲ ಉರಿಯ ಹೊತ್ತು’, ಚೌಗಲೆ ಕತೆಗಳು’ ಮತ್ತು ’ಜಂಗು ಹಿಡಿದ ಬ್ಲೇಡು’ ಅವರ ಕಥಾ ಸಂಕಲನಗಳು. ನಟನ ತಂಡದ’ಗಾಂಧಿ-ಅಂಬೇಡಕರ’೧೦೦ ನೇ ಪ್ರಯೋಗ ಕಂಡಿದೆ. ಈ ವರ್ಷದ ನೀನಾಸಮ್ ತಿರುಗಾಟದಲ್ಲಿ ’ಗಾಂಧಿ ವಿರುದ್ಧ ಗಾಂಧಿ’ ಪ್ರಯೋಗ ಕಾಣುತ್ತಿದೆ. ’ದಿಶಾಂತರ’ವು ಮರಾಠಿ,ಇಂಗ್ಲೀಷ್ ಗೆ ಅನುವಾದಗೊಂಡಿದೆ.ಕನ್ನಡದಲ್ಲಿ ಏಳು ಆವೃತ್ತಿ ಕಂಡಿದೆ.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಿ.ಎ ಕನ್ನಡ ಮೊದಲನೆ ಸೆಮಿಸ್ಟರ್ ಗೆ ಪಠ್ಯವಾಗಿದೆ. ’ಗಾಂಧಿ ವಿರುದ್ಧ ಗಾಂಧಿ’ ನಾಟಕವು ಬೆಂಗಳೂರು ವಿ.ವಿ. ಎಮ್.ಎ ಗೆ ಪಠ್ಯವಾಗಿದೆ.ರಂಗಭೂಮಿ ಹಾಗು ಚಿತ್ರಕಲೆಗೆ ಸಂಬಂಧಿಸಿದಂತೆ ಸೇರಿ ೨೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.ಚಿತ್ರಕಲಾವಿದರಾದ ಇವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬೈ, ಪುಣೆ, ಕೊಚ್ಚಿನ್, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. ಚಿತ್ರಕಲೆ, ರಂಗಭೂಮಿ ಕುರಿತು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡಮಿಯ ’ನಾಟಕಕಾರ ಪ್ರಶಸ್ತಿ’, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ ’ಚದುರಂಗ’ ಪ್ರಶಸ್ತಿ ಮತ್ತು ’ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ’ ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ ’ವರದರಾಜ ಆದ್ಯ’ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ದಿಶಾಂತರ ನಾಟಕವು ಮರಾಠಿ ಭಾಷೆಗೆ ಅನುವಾದಗೊಂಡಿದೆ. ’ಕನ್ನಡ-ಮರಾಠಿ ಆಧುನಿಕ ರಂಗಭೂಮಿ: ತೌಲನಿಕ ಅಧ್ಯಯನ’ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿದೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ರಂಗಾಯಣ ರಂಗಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

https://www.facebook.com/pages/Kannada-Rangabhoomi
        ನಾಟಕಗಳು  ಜೀವನ ಸಂದೇಶ ನೀಡುವುದರ ಮೂಲಕ ಸಮಾಕಾಲೀನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಪ್ರಸ್ತುತ ಸಮಾಜದ ಭಯಂಕರ ಸಾಮಾಜಿಕ ಅನಿಷ್ಠವಾದ ವರದಕ್ಷಿಣೆಯ ಮಾರಕ ಪರಿಣಾಮಗಳನ್ನು ಬಿಂಬಿಸುವ, ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾಕಷ್ಟು ರಂಗ ನಾಟಕಗಳು ಬಂದಿವೆಯಾದರೂ, ಒಂದು ಗಟ್ಟಿ ಕಥೆಯನ್ನು ಹೊಂದಿರುವ ತಾಳಿಯಲ್ಲ ನೇಣು ಪಾಶಾ ಅರ್ಥಾತ್ ತಾಳಿ ಕಟ್ಲಿಕ್ಕೂ ಕೂಲಿ ಎನ್ನುವ ನಾಟಕ ಒಂದು ಅರ್ಥ ಪೂರ್ಣ ರಂಗಾಭಿವ್ಯಕ್ತಿಗೆ ಉದಾಹರಣೆ.

ಈ ನಾಟಕ ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ನೂರಾರು ಪ್ರಯೋಗಗಳನ್ನು ಕಂಡಿವೆ. ಎಷ್ಟು ಪ್ರಯೋಗಳಾದರೂ ಕೂಡಾ ನಿತ್ಯ ನೂತನವೆನ್ನುವಂತೆ  ರಂಗದಲ್ಲಿ ಕಾಣುವ ತಾಳಿ ಅಲ್ಲ ನೇಣು ಪಾಶಾ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷನ ದಾಷ್ಟ್ಯ, ಬಡವನ ಬದುಕನ್ನು ಆಟದ ದಾಳವನ್ನಾಗಿ ಬಳಸಿಕೊಳ್ಳುವುದನ್ನು ಯಥಾವತ್ತಾಗಿ ತಿಳಿಸುತ್ತದೆ. ಮಗನ ಮಾನವೀಯ ಕಾರ್ಯವನ್ನು ಪ್ರೋತ್ಸಾಹಿಸದ ತಂದೆ, ಸೊಸೆಯನ್ನೆ ಮುಗಿಸಲು ಸುಪಾರಿ ನೀಡುವುದು, ಬಡವನ ಬದುಕಿನಲ್ಲಿ ಕ್ಷಣಕ್ಷಣಕ್ಕೂ ಕಾಡುವ ವರದಕ್ಷಿಣೆಯ ಕ್ರೂರತೆ ನಾಟಕವನ್ನು ಗಂಭೀರತೆಯತ್ತ ಕೊಂಡ್ಯೊದರೂ, ಇಡೀ ನಾಟಕದ ಉದ್ದಕ್ಕೂ ಗಂಭೀರತೆಗಿಂತ ನವಿರು ಹಾಸ್ಯ ಜೋಡಣೆಯಿಂದ ನಾಟಕ ಪ್ರೇಕ್ಷಕರನ್ನು ಕುತೂಹಲದ ತುದಿಯಲ್ಲಿ ನಿಲ್ಲಿಸುತ್ತದೆ.
ಈ ನಾಟಕವನ್ನು ಗಣೇಶೋತ್ಸವದ ಪ್ರಯುಕ್ತ ಇತ್ತಿಚಿಗೆ ವಂಡ್ಸೆಯಲ್ಲಿ ಸ್ಥಳೀಯ ಯುವಕರು ಯಶಸ್ವಿಯಾಗಿ ಪ್ರದರ್ಶಿಸಿದರು. ದುಬಾರಿ ಸಂಭಾವನೆ ನೀಡಿ, ದೂರ ದೂರದ ಕಲಾವಿದರನ್ನು ಕರೆಸಿ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುವುದೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ತಾಳ್ಮೆಯಿಂದ ಅಭಿನಯ ಕಲಿತು ನಾಟಕವನ್ನುಸಮರ್ಥವಾಗಿ ಅಭ್ಯವ್ಯಕ್ತಿ ಪಡಿಸಿದ ಸ್ಥಳೀಯ ಯುವಕರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.
ಗಟ್ಟಿ ಕಥೆ, ಕಠಿಣವಾದ ಸಂಭಾಷಣೆಗಳು, ಕ್ಲೀಷ್ಟವಾದ ಸನ್ನಿವೇಶಗಳು, ಪಾತ್ರಗಳ ಒಟ್ಟು ಔಚಿತ್ಯವನ್ನು ಬದಲಾಯಿಸುವ ದೃಶ್ಯಗಳಿಂದ ಈ ನಾಟಕ ಕಲಾವಿದರಿಗೆ ತುಸು ಕಷ್ಟವೆನಿಸಿದರೂ, ಆಸಕ್ತಿಯಿದ್ದರೆ, ನೀರು ಕುಡಿದಷ್ಟು ನೀರಾಳವಾಗಿ ಪ್ರದರ್ಶನ ನೀಡಲು ಸಾಧ್ಯ ಎನ್ನುವುದಕ್ಕೆ ಇದು ಒಂದು ಉದಾರಣೆ ಅಷ್ಟೆ. ಕಥೆಯ ಖಳನಾಯಕ ಕಾರ್ತಿಕ್ ಪಾತ್ರದಲ್ಲಿ ಹವ್ಯಾಸಿ ಕಲಾವಿದ ಮಧುಕರ ಗಾಣಿಗ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಥಾ ನಾಯಕಿ ಪೂಜಾಳ ಪಾತ್ರದಲ್ಲಿ ವಿಜೇತ್ ನಾಯ್ಕ್ ತನ್ನ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಕಥೆಯ ಜೀವಾಳವಾದ  ಉಮೇಶನ ಪಾತ್ರದಲ್ಲಿ ಮಂಜುನಾಥ ಗಾಣಿಗ,  ಅಮಿತನಾಗಿ ವಿಜಯ್, ಸೂರಜ್ ಪಾತ್ರದಲ್ಲಿ ಸಂದೇಶ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಮೂರು ಪಾತ್ರಗಳಲ್ಲಿ ದುಃಖ, ಗಂಬೀರತೆ, ತ್ಯಾಗ, ಅಸಹನೆ, ಕೋಪ ಎಲ್ಲವೂ ಇದೆ. ಅದರ ಅಭಿವ್ಯಕ್ತಿ ಉತ್ತಮ.
ನಾಟಕದಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿದ್ದು ಹಾಸ್ಯ ಪಾತ್ರಗಳು. ಶಂಭು ಶಾಸ್ತ್ರೀಯಾಗಿ ಸಭೆಯ ಮಧ್ಯದಿಂದ ಪ್ರವೇಶ ಮಾಡಿದ ಎಲ್.ಎನ್. ಆಚಾರ್ಯ ತನ್ನ ಮಾಗಿದ ಅಭಿನಯದಿಂದ ಶಹಬ್ಬಾಸ್ ಗಿರಿ ಪಡೆದರೆ, ಶಾಸ್ತ್ರಿ ಮಕ್ಕಳಾದ ಅಣ್ಣಯ್ಯ ಹಾಗೂ ರಾಮಾಚಾರಿ ಪಾತ್ರದಾರಿಗಳು ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪಟ್ಮಂಜನಾಗಿ ಗಿರೀಶ್ ಎನ್.ನಾಯ್ಕ್ ತನ್ನ ಚುರುಕು ಅಭಿನಯದಿಂದ ಗಮನ ಸಳೆದರೆ, ಪುಟ್ಮಲ್ಲಿಯ ಪಾತ್ರದಲ್ಲಿ ಚೇತನ್, ಶ್ರೀಮಂತನ ಪಾತ್ರದಲ್ಲಿ ವಿಠಲ ಆಚಾರ್ಯ, ರಾಘವೇಂದ್ರ ಬಿಟಿ, ಸೌಮ್ಯಳ ಪಾತ್ರದಲ್ಲಿ ಪ್ರಭಾಕರ ಗಾಣಿಗ ಮೊದಲಾದ ಸಹಕಲಾವಿದರ ಪ್ರಾಮಾಣಿಕ ಪಾತ್ರ ಪೋಷಣೆ ಗಮನೀಯ. ಶಿಕ್ಷಕ ಗಣೇಶ ದೇವಾಡಿಗರ ವೃದ್ಧನ ಪಾತ್ರ, ಶಿಕ್ಷಕ ಮಂಜುನಾಥ್ ಚಂದನ್‍ರ ಅಣ್ಣಯ್ಯ ಶಾಸ್ತ್ರಿಯ ಪಾತ್ರ ನೆನಪಲ್ಲಿ ಉಳಿಯುತ್ತದೆ.
ವಾಸು ಜಿ.ನಾಯ್ಕ್ ಹಾಗೂ ದಾಮೋದರ್ ಅವರ ನಿರ್ದೆಶನ,  ದಯಾನಂದ ಆಚಾರ್ಯರ ಹಿನ್ನೆಲೆ ಸಂಗೀತ ನಾಟಕಕ್ಕೆ ಮೆರುಗು ತಂದರೆ, ಸ್ಥಳೀಯ ಹುಡುಗರ ಪ್ರಯತ್ನ ಭವಿಷ್ಯದ ರಂಗ ಸಾಧನೆಯ ಮುನ್ಸೂಚನೆ.
-ನಾಗರಾಜ್ ವಂಡ್ಸೆ
ಪತ್ರಕರ್ತರು

ನಾಟಕ ವಿಮರ್ಶೆ: `ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?'

ನಾಟಕ ವಿಮರ್ಶೆ: `ಗಾಂಧಿ ವರ್ಸಸ್ ಗಾಂಧಿ'
ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?
ಯಾವುದೇ ಸೃಜನಶೀಲ ಅಥವಾ ರಂಗ ಭೂಮಿ ಚಟುವಟಿಕೆಗೆ ತನ್ನದೇ ಆದ ಉದ್ದೇಶವಿರುತ್ತದೆ. ಅಂದರೆ- ಮನರಂಜನೆಯೋ, ವೈಚಾರಿಕತೆಯೋ, ಇತಿಹಾಸ ಬಿಚ್ಚಿಡುವುದೋ, ಜಗತ್ತಿನ ಕೆಲವು `ಇಸಂ'ಗಳ ಅಥವಾ ಮೌಲ್ಯಗಳ ಪ್ರತಿಪಾದನೆಯೋ, ಮೌಢ್ಯಗಳ ಧಿಕ್ಕರಿಸಿ ಸಮಾಜದ ಓರೆ ಕೋರೆಗಳನ್ನು ತಿದ್ದುವುದೋ-ಹೀಗೆ ಉತ್ತಮ ಸಂದೇಶ ಸಾರುವುದಾಗಿರುತ್ತದೆ; ಆಗಿರಲೂ ಬೇಕು!
ಆದರೆ ಹಾಸನದ ಕಲಾಭವನದಲ್ಲಿ ಸ್ಥಳೀಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನವೆಂಬರ್ 24 ರಂದು ಸಂಜೆ `ಕಲಾಸಿರಿ' ತಂಡವು ರಂಗ ಕರ್ಮಿ ಜಯಶಂಕರ ಬೆಳಗುಂಬ ನಿರ್ದೇಶನದಲ್ಲಿ ಪ್ರಯೋಗಿಸಿದ `ಗಾಂಧಿ ವರ್ಸಸ್ ಗಾಂಧಿ' ಎಂಬ ನಾಟಕದಲ್ಲಿ ಇಂತಹ ಯಾವುದೇ ಉದ್ದೇಶ ಕಾಣಲಿಲ್ಲ; ಕಥಾ ವಸ್ತುವನ್ನು ನಿರ್ದೇಶಕರು ತಮ್ಮ ಮೂಗಿನ ನೇರಕ್ಕೆ ತೆಗೆದುಕೊಂಡಿರುವಂತೆ ಕಾಣುತ್ತದೆ. ಕಥಾ ವಸ್ತುವಿನಲ್ಲಿದ್ದ ಕೆಲವು ವಾಸ್ತವಾಂಶಗಳನ್ನು ಮರೆಮಾಚಿರುವುದೇ ಇದಕ್ಕೆ ಸಾಕ್ಷಿ! ಗಾಂಧಿ ಎಂಬ ವ್ಯಕ್ತಿತ್ವ ನಮ್ಮ ಮೂಗಿನ ನೇರಕ್ಕೆ ನಿಲ್ಲುವಷ್ಟು ಸೀಮಿತವೆ!?
ತುಂಬಾ ಆಸಕ್ತಿ, ಉತ್ಸಾಹ ಹಾಗೂ ಜತನದಿಂದ ನಾಟಕ ಪ್ರಯೋಗಿಸಿರುವ ಜಯಶಂಕರ ಬೆಳಗುಂಬ ಅವರನ್ನು ಸದ್ಯಕ್ಕೆ ನಿರ್ಲಿಪ್ತ ಭಾವದಿಂದಲೇ ಒಂದು ಕಡೆ ನಿಲ್ಲಿಸಿ, ಮೊದಲು ಈ ಗಾಂಧಿ ವರ್ಸಸ್ ಗಾಂಧಿ ಎಂಬ ಕೃತಿಯತ್ತ ಗಮನ ಹರಿಸಬೇಕಿದೆ! ಇದು ಗುಜರಾತಿ ಭಾಷೆಯಲ್ಲಿ ದಿನಕರ ಜೋಷಿ ಅವರು ಬರೆದ ಒಂದು ಮೂಲ ಕಾದಂಬರಿ. ಸ್ಮಿತಾ ಭಾಗವತರು ಇದನ್ನು ಮರಾಠಿಗೆ ಅನುವಾದಿಸಿದರು. ಅದೊಂದು ವಿವಾದಾತ್ಮಕ ಸಾಹಿತ್ಯ ಕೃತಿ. ಹೀಗಾಗಿಯೇ ಅದನ್ನು ಗುಜರಾತ್ ಸರ್ಕಾರ ನಿಷೇಧಿಸಿತು.
ಇನ್ನು, ಹೊಸ ತಲೆಮಾರಿನ ನಾಟಕ ನಿರ್ದೇಶಕರು `ರಂಗ ಕೃತಿ'ಯಾಗಬಲ್ಲ ಒಂದು ಸಾಹಿತ್ಯವನ್ನೇ ಆರಿಸಿ, ನಿರ್ದೇಶಕರ ಸಲುವಾಗಿಯೇ ನಾಟಕ ರಚಿಸಿಕೊಳ್ಳುವ ಪರಿಪಾಠ ಹೊಸದೇನಲ್ಲ. ಅಂತಹ ಪ್ರಯತ್ನ ಸಾಫಲ್ಯ ಕಾಣದಿದ್ದಾಗ ಕಥೆ, ಕಾದಂಬರಿಗಳನ್ನು ರೂಪಾಂತರಿಸಿಕೊಂಡು ರಂಗ ಪ್ರಯೋಗಕ್ಕೆ ಇಳಿದರು. ಗಾಂಧಿ ವರ್ಸಸ್ ಗಾಂಧಿ ಎಂಬ ಸಾಹಿತ್ಯ ಕೃತಿಯನ್ನು ಅಜಿತ್ ದಳವಿ ಎಂಬುವರು ಮರಾಠಿ ನಾಟಕವಾಗಿ ರೂಪಾಂತರಿಸಿದ್ದೂ ಸಹ ಇಂತಹ ಪ್ರಯೋಗಗಳಲ್ಲಿ ಒಂದು. ಇದನ್ನೇ ಬೆಳಗಾವಿಯ ಡಿ.ಎಸ್. ಚೌಗಲೆ ಎಂಬುವರು ಕನ್ನಡಕ್ಕೆ ಅನುವಾದಿಸಿದರು. ಸತ್ತುಹೋಗಿದ್ದ ಕೃತಿಯೊಂದಕ್ಕೆ ಮರು ಜೀವ ಬಂದದ್ದು ಹೀಗೆ!
ಈಗ ನಾವು ನೋಡುತ್ತಿರುವ ರಂಗ ರೂಪ ಪಡೆದ ಕೃತಿಯ ಕಥಾ ವಸ್ತುವಿನ ಪ್ರಕಾರ, `ಗಾಂಧಿ ತಮ್ಮ ಹಿರಿಯ ಮಗ ಹರಿಲಾಲನನ್ನು ನಿರ್ಲಕ್ಷಿಸಿದರು; ಅವನು ಬೆಳೆಯಲು ಯಾವ ಅವಕಾಶವನ್ನೂ ನೀಡದೆ ಅವನ ಜೀವನ ಹಾಳು ಮಾಡಿದರು; ಹರಿಲಾಲ್ ಸೇರಿದಂತೆ ತಮ್ಮ ಕುಟುಂಬ ಸದಸ್ಯರಿಗೆ ಸಲ್ಲಬೇಕಾದ ಐಹಿಕ ಸುಖ ಭೋಗಗಳನ್ನು ನಿರಾಕರಿಸಿದರು; ಆತ ಬೇಸತ್ತು ಮುಸಲ್ಮಾನನಾಗಿ ಮತಾಂತರ ಹೊಂದಿದ; ಆ ನಂತರ ಮತ್ತೆ ಹಿಂದೂ ಮತಕ್ಕೆ ಮರಳಿದ; ಮಗ ಹರಿಲಾಲನೇ ಅಪ್ಪ ಗಾಂಧೀಜಿಯ ಬದ್ಧ ದ್ವೇಷಿಯಾದ; ಅಲೆಮಾರಿಯಾದ; ಕೊನೆಗೆ ಅಯ್ಯೋ! ಗಾಂಧೀಜಿ ಮಗನಾಗಿ ಕೊನೆಗಾಲದಲ್ಲಿ ದಿಕ್ಕಿಲ್ಲದ ಅನಾಥನಂತೆ ಸತ್ತ; ಒಟ್ಟಾರೆ ಗಾಂಧಿ ಎಂಬ ಮನುಷ್ಯ ಸಹಜ ಜೀವನ ಕ್ರಮದ `ವಿರೋಧಿ'; ``ಅದ್ಯಾವೊದೋ ನೈತಿಕ ಶಿಕ್ಷಣ''ದ ಹೆಸರಲ್ಲಿ ಎಲ್ಲವನ್ನೂ ಪ್ರಶ್ನಿಸುವ ಹಾಗೂ ಎಲ್ಲದಕ್ಕೂ ಅಡ್ಡಿಪಡಿಸುವ ಒಂದು ಮಹಾನ್ ಕೊರೆತ'- ಇದು ಗಾಂಧಿಯನ್ನು ``ಬೇರೆಯದೇ ದೃಷ್ಟಿ ಕೋನದಿಂದ ಅಳೆಯಲು'' ದೇಶದ ಒಂದು ವರ್ಗಕ್ಕೆ ಸಿಕ್ಕಿದ ಉದ್ದನೆಯ ಮೀಟರ್ ಕಡ್ಡಿ!
ನಂತರದ ಸರದಿ ನಿರ್ದೇಶಕ ಜಯಶಂಕರ ಬೆಳಗುಂಬರದ್ದು. ಈ ಮುನ್ನ ಒಂದು ಕಡೆ ನಿಲ್ಲಿಸಿದ್ದ ಅವರನ್ನು ಇದೀಗ ರಂಗದ ಮೇಲೆ ತರೋಣ. ಗಾಂಧಿ ಪಾತ್ರಧಾರಿಯೂ ಆಗಿ-ಅದರಲ್ಲೂ ಬ್ಯಾರಿಸ್ಟರ್ ಗಾಂಧಿಯಾಗಿ (ವಯಸ್ಸಿದ್ದಾಗಲೂ ಬಗ್ಗಿ ನಡೆಯುತ್ತಿದ್ದರು ಎಂಬುದನ್ನು ಹೊರತುಪಡಿಸಿದರೆ) ಅವರ ನಟನೆ ನಿಜಕ್ಕೂ ಸಹಜ ಹಾಗೂ ತಲೆದೂಗುವಂತಿತ್ತು. ಆದರೆ ಇದೇ ಮಾತನ್ನು ಅವರ ನಿರ್ದೇಶನದ ಬಗ್ಗೆ ಹೇಳುವಂತಿಲ್ಲ ಎಂಬುದೇ ಒಂದು ದೊಡ್ಡ ವ್ಯಥೆ!
ಹರಿಲಾಲ ದಾರಿ ತಪ್ಪಿದ್ದು ಎಲ್ಲಿ-ಏಕೆ? ಆತನ ಸಹವಾಸಗಳು, ಸ್ನೇಹ ಸಂದರ್ಭಗಳು ಹೇಗಿದ್ದವು? ಅವನ ದೌರ್ಬಲ್ಯಗಳೇನು? ಅವನ ಬಂಡಾಯ ಎಂತಹುದು ಮತ್ತು ಯಾವುದಕ್ಕಾಗಿ? ನಿಜವಾಗಿಯೂ ಗಾಂಧಿಯೇ ಅವನನ್ನು ಹೊಸಕಿ ಹಾಕಿದರೆ?- ಇತ್ಯಾದಿ ಯಾವ ನೈಜ ಅಂಶಗಳನ್ನೂ ನಾಟಕ ಎತ್ತಿ ಹಿಡಿದಿಲ್ಲ. ವಾಸ್ತವವಾಗಿ ಕೃತಿಯಲ್ಲಿಯೇ ಇದ್ದ ಕೆಲವು ಮಹತ್ವದ ತಿರುವುಗಳನ್ನೂ ಸಹ ಮರೆ ಮಾಚಲಾಗಿದೆ! ಹಾಗಾದರೆ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಅವರ ಉದ್ದೇಶವಾದರೂ ಏನು?
ಹರಿಲಾಲ ನಿಜಕ್ಕೂ ಹಾಳಾಗಿದ್ದು ಒಂದು ನಿರ್ದಿಷ್ಟ ಗುಂಪು ಹೂಡಿದ ಒಂದು ಸಂಚಿನಿಂದ! ಗಾಂಧೀಜಿ ಹೆಸರಿನಲ್ಲಿ ಮೂರನೆಯವರು ಆತನನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಫಲವಾಗಿ ಆತ ಹಾಳಾದ. ಅವನ ದೌರ್ಬಲ್ಯಗಳೇ ಅವನು ಅಂತಹವರ ಬಲೆಗೆ ಬೀಳಲು ಕಾರಣವಾದವು. ನಂತರ ಮದ್ಯ ವ್ಯಸನಿಯೂ ಆದ. ಪರಿಣಾಮವಾಗಿ ಆತ ಉದ್ಯಮವೊಂದರ ಶೇರುಗಳನ್ನು ನುಂಗಿದ ದಗಾಕೋರನಾಗಿ ಪೊಲೀಸರು ಅವನನ್ನು ಬಂಧಿಸಿದ್ದರು. ಸಂಚಿನ ಫಲವಾಗಿಯೇ ಹಿಂದೂ ಮತ ತೊರೆದು ಮುಸಲ್ಮಾನನಾಗಿ ಮತಾಂತರಗೊಂಡ. ನಂತರ ಮಹದೇವ ದೇಸಾಯಿ ಅವರ ಮೂಲಕ ಆತನ ತಾಯಿಯ ಆಗ್ರಹ ಹಾಗೂ ಬೇಗುದಿ ಅರಿತು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ. ಹೀಗೆಯೇ ದಿನೇ ದಿನೇ ತಾನಾಗಿಯೇ ನೈತಿಕವಾಗಿ ಹಾಗೂ ಸಾಮಾಜಿಕವಾಗಿ ಅಥಃಪತನ ಹೊಂದುತ್ತಾ ಸಾಗಿ ಕೊನೆಗೆ ದಿಕ್ಕಿಲ್ಲದ ಅನಾಥನಂತೆ ಸತ್ತ. ದೊಡ್ಡ ಮನುಷ್ಯರ ಮಗನೊಬ್ಬ ಹೇಗಿರಬಾರದು ಎಂಬುದಕ್ಕೆ ಆತ ನಿದರ್ಶನ; ಇಂತಹ ಹರಿಲಾಲರು ಸಮಾಜದಲ್ಲಿ ಲಕ್ಷಾಂತರ ಮಂದಿ ಸಿಗುತ್ತಾರೆ; ಹೀಗಾಗಿ ಹರಿಲಾಲ ಇಂದಿಗೂ ಪ್ರಸ್ತುತ. ಆತನನ್ನು ಅಪ್ರಸ್ತುತ ಮಾಡುವುದೇ ಒಂದು ಸೃಜನಶೀಲ ಕೃತಿಯ ಮೂಲ ಸದುದ್ದೇಶವಾಗಬೇಕು.
ಆದರೆ ಗಾಂಧಿ!? ಊರಿಗೊಬ್ಬ, ರಾಜ್ಯಕ್ಕೊಬ್ಬ ಇರುವುದು ಹಾಳಾಗಲಿ; ಇಡೀ ದೇಶ-ಜಗತ್ತಿಗೇ ಇನ್ನೊಬ್ಬ ಗಾಂಧಿ ಈಗ ಇದ್ದಾನೆಯೇ? ಹೀಗಾಗಿ ಗಾಂಧಿ ಎಂಬ ಸಾಧಕ ಅಪ್ರಸ್ತುತ! ನಿಜ! ಆ ವ್ಯಕ್ತಿಯನ್ನು ಮರೆತೇ ಬಿಡೋಣ. ಆದರೆ ಆತ ಹಿಡಿದಿದ್ದ `ಸಾಧನ'ಗಳು ಇವೆಯಲ್ಲ ಅವು? ಮನುಕುಲದ ಆರಂಭದಿಂದ ಅಂತ್ಯವಾಗುವವರೆಗೂ ಅವು `ನಿಮಗಾಗಿ ನಾವು ಇಲ್ಲಿ ಇದ್ದೇವೆ' ಎಂದು ಸಾರುತ್ತಾ ನಿಂತೇ ಇರುತ್ತವೆ. `ಅಪ್ರಸ್ತುತ' ಎಂದು ನಾವು ಅವನ್ನು ಹಿಡಿಯದೇ ಇರಬಹುದು; ಅದು ನಮಗಾಗುವ ಭಾರಿ ನಷ್ಟವೇ ಹೊರತು ಸತ್ಯ ಅಹಿಂಸೆಗಳಿಗೆ ಆಗುತ್ತಿರುವ ನಷ್ಟವಲ್ಲವಲ್ಲಾ!? ಹೀಗಾಗಿ ಯಾವ ಹರಿಲಾಲನನ್ನು ಅಪ್ರಸ್ತುತ ಮಾಡುವುದು ಒಂದು ಕೃತಿಯ ಸದುದ್ದೇಶವೋ; ಅದೇ ರೀತಿ `ಗಾಂಧಿ'ಯನ್ನು ಪ್ರಸ್ತುತ ಮಾಡುವುದೂ ಸಹ ಅದೇ ಕೃತಿಯ ಸದುದ್ದೇಶವಾಗಬೇಕು!!
ಹರಿಲಾಲನ ಸ್ವಯಂಕೃತ ಅಪರಾಧಗಳಿಗೆ ಗಾಂಧಿ ಹೇಗೆ ಹೊಣೆಯಾಗುತ್ತಾರೆ!? ನಾಟಕದಲ್ಲಿ ಕಾಲ, ದೇಶ, ಪರಿಸ್ಥಿತಿಗಳ ಅರಿವೇ ಇಲ್ಲದೆ ಗಾಂಧಿ ಎದುರಿಗೇ ಹರಿಲಾಲನ ಅಸಹಜ ಅಬ್ಬರ, ಅಟ್ಟಹಾಸ, ಕೊನೆಗೆ ಅಪ್ಪ ಗಾಂಧಿ ಗುಂಡೇಟಿಗೆ ಬಲಿಯಾದನೆಂಬ ಸುದ್ದಿ ಕೇಳಿದಾಗಲೂ ಸಹ `ಈ ಗಾಂಧಿ ಪತ್ರ ಬರೆಯಲೂ ಅಡಚಣೆ ಮಾಡುತ್ತಾನೆ' ಎಂಬ ಅಸಹನೀಯ ಡೈಲಾಗ್!! ಯಾವ `ಉತ್ಕೃಷ್ಟ ಮೌಲ್ಯ'ಗಳನ್ನು ಪ್ರತಿಪಾದಿಸಲು ಮೇಲ್ಕಂಡ ವಾಸ್ತವಾಂಶಗಳನ್ನು ಮರೆ ಮಾಚಿ ಬರೇ ಹರಿಲಾಲನ ಅಬ್ಬೇಪಾರಿತನಕ್ಕೆ ಒತ್ತು ಕೊಡಲಾಗಿದೆ!? ಮೊದಲೇ ಈ ಕೃತಿಯಲ್ಲಿ ಸತ್ಯ, ಅಹಿಂಸೆ, ಧರ್ಮ ಎಂಬ ಸಾರ್ವಕಾಲಿಕ ಮೌಲ್ಯಗಳನ್ನು ಕಡೆಗಣಿಸಿ ಐಹಿಕ ಸುಖ ಭೋಗಗಳಿಗಷ್ಟೇ ಒತ್ತು ನೀಡಲಾಗಿದೆ. ಅಂತಹ ಸಂದರ್ಭದಲ್ಲಿ, ಬೆಳಗುಂಬರಂಥಹ ಓರ್ವ ನಿರ್ದೇಶಕರು, ಅದರಲ್ಲೂ ತಮಗೆ ಬೇಕಾದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು ವೈಯಕ್ತಿಕ ಅಭಿಪ್ರಾಯಗಳನ್ನು ಪ್ರೇಕ್ಷಕರ ಮೇಲೆ ಹೇರುವುದು ಎಷ್ಟು ಸರಿ? ಹಾಗಾದರೆ ಮಾನವೀಯತೆ ಮೂಲ ಯಾವುದು? ಅದು ಜನರಲ್ಲಿ ಚಿಗುರುವ ಭರವಸೆಯಾದರೂ ಉಳಿದೀತೆ? ಬಸವ, ಬುದ್ಧ, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರ ವಿಚಾರ ಧಾರೆಗಳಿಗೆಲ್ಲ ಯಾವ ಗತಿ ಹಿಡಿದೀತು? ಚಿಂತಿಸಿದರೆ ಭಯವಾಗುತ್ತದೆ!
ಒಂದು ಪರಂಪರೆ ಅಥವಾ ಇತಿಹಾಸವನ್ನು ನಾವು ನೋಡುವ ದೃಷ್ಟಿಕೋನ ಬೇರೆಯೇ ಇದೆ. ಅಂದರೆ, ಒಂದು ಮೌಲ್ಯ ಅಥವಾ ಧೋರಣೆಯನ್ನು ನಾವು ಮೊದಲು ಆಯಾ ಕಾಲ, ದೇಶ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಂತರವಷ್ಟೇ ಅದನ್ನು ವರ್ತಮಾನದೊಂದಿಗೆ ಸಮೀಕರಿಸಬೇಕು. ಆಗ ಮಾತ್ರ ಒಂದು ಸತ್ಯವೋ ಅಥವಾ ಸತ್ಯಕ್ಕೆ ಹತ್ತಿರವಾದ ಒಂದು ಹೊಳವೋ ಸಿಗುವ ಸಾಧ್ಯತೆ ಇದೆ. ಹಾಗೆ ಮಾಡದೆಯೇ ನಾವು ಕೇವಲ ವರ್ತಮಾನದ ದೃಷ್ಟಿಕೋನ ಇಟ್ಟುಕೊಂಡು `ಇದೆಂತಹ ಮೌಲ್ಯ; ಈ ಧೋರಣೆ ಅಮಾನವೀಯ...'ಹಾಗೆ ಹೀಗೆ ಎಂದೆಲ್ಲ ಬಡಬಡಿಸಿದರೆ-ಅದು ವರ್ತಮಾನಕ್ಕೆ ಮಾಡಿದ ದ್ರೋಹವಾಗುತ್ತದೆ; ಹಲವು ಅನರ್ಥಗಳಿಗೆ ಕಾರಣವಾಗುತ್ತದೆ. ಇಲ್ಲಿ ಆಗಿರುವುದೋ ಅದೇ! ಹೀಗಾಗಿಯೇ ಈ ಪ್ರಯೋಗದಲ್ಲಿ ಕೌಟುಂಬಿಕ ಅಥವಾ ಸಾಮಾಜಿಕ ವ್ಯಕ್ತಿ ಸಂಬಂಧಗಳ ನಡುವೆ ಗಾಂಧಿ ಕಾಲದ ನಡೆ ನುಡಿಯಾಗಲಿ; ಒಂದು ನವಿರಾಗಲಿ, ಬೇಗುದಿಯಾಗಲಿ, ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತಹ ಯಾವುದೇ ಸೂಕ್ಷ್ಮತೆಗಳಾಗಲಿ ಕಾಣಸಿಗುತ್ತಿಲ್ಲ. ಎಷ್ಟೇ ಎಣ್ಣೆ ಹೊಯ್ದರೂ ದೀಪ ಹತ್ತಿ ಉರಿಯಲು ನಿರಾಕರಿಸಿದರೆ ಇನ್ನೊಬ್ಬರಿಗೆ ಬೆಳಕು ನೀಡಲು ಸಾಧ್ಯವೆ? ಸಾಣೆಕಲ್ಲಿನ ಮೇಲೆ ಉಜ್ಜಲು ಹೋದಾಗ ಗಂಧದ ಕೊರಡು ತೇಯ್ದುಕೊಳ್ಳಲು ನಿರಾಕರಿಸಿದರೆ ಸುಗಂಧ ಪಸರಿಸಲು ಸಾಧ್ಯವೆ?
ಎರಡನೆಯದಾಗಿ, ಯಾವುದೇ ರಾಷ್ಟ್ರ ನಾಯಕನ ಕಾರ್ಯ ಕ್ಷೇತ್ರವಾದ ರಾಜಕೀಯದ ದಟ್ಟ ನೆರಳು ಆತನ ಕುಟುಂಬದ ಮೇಲೂ ಸದಾ ಹರಡಿಕೊಂಡೇ ಇರುತ್ತದೆ. ಭಾರತದಂತಹ ಓರ್ವ ರಾಷ್ಟ್ರ ನಾಯಕನ ಹಾಗೂ ಇಡೀ ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಹಿಂಸಾತ್ಮಕ ಚಳವಳಿಯ ಮೂಲಕ ಸ್ವಾತಂತ್ರ್ಯ ಗಳಿಸಿಕೊಡಲು ಹೊರಟಿದ್ದ ಗಾಂಧೀಜಿ ಕುಟಂಬದ ಮೇಲೂ ಇಂತಹ ನೆರಳು ಹಬ್ಬಿತ್ತು. ಮೇಲೆ ಹೇಳಿದಂತೆ ಹರಿಲಾಲನನ್ನು ಕೆಡಿಸಿದ ಒಂದು ಗುಂಪಿನ ಸಂಚೂ ಸಹ ಇದರ ಒಂದು ಭಾಗವೇ ಆಗಿದೆ. ``ಗಾಂಧಿ ಮೈ ಫಾದರ್'' ಹಿಂದಿ ಸಿನಿಮಾ ನೋಡಿದರೆ ಇದೆಲ್ಲಾ ಅರ್ಥವಾದೀತು! ಒಟ್ಟಾರೆ ಯಾವುದೇ ನಾಟಕದ ಮೂಲಕ ಯಾವುದೇ ವಿಚಾರ ಪ್ರತಿಪಾದಿಸಿದರೂ ಅದು ಸದಭಿರುಚಿಯಿಂದ ಕೂಡಿರಬೇಕು; `ನಾವು ಆಡ್ತೀವಿ; ನೀವು ನೋಡ್ಕೊಂಡು ಹೋಗಿ' ಎಂಬಂತಿರಬಾರದು.
ಇನ್ನು, ಕಲಾಭವನದ ಧ್ವನಿಯ ವ್ಯವಸ್ಥೆಯಂತೂ ಯಥಾಪ್ರಕಾರ ಅದ್ವಾನವಾಗಿಯೇ ಇದೆ. ಬೆಳಕಿನ ವ್ಯವಸ್ಥೆ ಪರವಾಗಿಲ್ಲ. ಸಬರಮತಿ ಆಶ್ರಮದ ಸೆಟ್, ಕಸ್ತೂರಬಾ ಕನಸು ಕಾಣುವುದನ್ನು ಸಂಯೋಜಿಸಿರುವ ವಿಧಾನ ಚೆನ್ನಾಗಿದೆ. ಸಂಗೀತ ಏನೇನೂ ಸಾಲದು. ಮೊದಲೇ ಹೇಳಿದಂತೆ ಬೆಳಗುಂಬರ ಗಾಂಧಿ ಪಾತ್ರದ ನಟನೆಯಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಉಳಿದ ಪಾತ್ರಧಾರಿಗಳಿಗೆ ಅನುಭವದ ಕೊರತೆ ಎದ್ದು ಕಾಣುತ್ತದೆ. ಇಂತಹ ನಾಟಕಕ್ಕೆ ಸಾಂಸ್ಕೃತಿಕ ವೇದಿಕೆಯವರು (ಇಬ್ಬರಿಗೆ) 50 ರೂ. ಟಿಕೆಟ್ ಇಟ್ಟಿದ್ದು ``ಗಾಂಧಿ(ಕ್ಲಾಸ್)ಗೆ ಟಿಕೆಟ್'' ನೀಡಲು ಎಂದು ಹೇಳಬಹುದೆ?
ಪ್ರಭಾಕರ. ಎಚ್.ಎಸ್ ಪ್ರಭು
ಕೆ ವೈ ನಾರಾಯಣಸ್ವಾಮಿಯವರ 'ಚಕ್ರರತ್ನ' ನಾಟಕದ ಯಶಸ್ವಿ ಪ್ರಯೋಗದ ಕೆಲವು ವಿಮರ್ಶಾ ಚಿತ್ರಗಳು.....


ರಂಗ ವಿಮರ್ಶೆ  ಎನ್ನುವುದುರ ಬೆನ್ನು ಹತ್ತಿ

Standard
       ‘ಮಲೆಗಳಲ್ಲಿ ಮದುಮಗಳು’ ಒಂದು ಕಾದಂಬರಿ. ಕನ್ನಡದ ಮನಸ್ಸನ್ನು ದಶಕಗಳಿಂದ ಆಳಿರುವ, ಆಳುತ್ತಿರುವ ಕಾದಂಬರಿ. ಕಿನ್ನರಿ ಜೋಗಿಗಳ ಬಗಲ ಜೋಳಿಗೆಯಿಂದ ಹಿಡಿದು ಮನೆ ಮನೆಯ ಕಪಾಟಿನಲ್ಲೂ, ಹಲವು ಕೈಗಳಲ್ಲೂ ಕಾಣಿಸಿಕೊಳ್ಳುವ ಕಾದಂಬರಿ. ಈ ಕಾದಂಬರಿ ಈಗ ಪ್ರಶ್ನೆ ಎತ್ತುತ್ತಿರುವುದು ಕಾದಂಬರಿ ಲೋಕದ ಬಗ್ಗೆ ಅಲ್ಲ, ರಂಗಭೂಮಿಯ ಬಗ್ಗೆ. ಸಿ. ಬಸವಲಿಂಗಯ್ಯ ರಂಗಾಯಣಕ್ಕಾಗಿ ಒಂದು ದೊಡ್ಡ ಸವಾಲು ಮುಂದಿಟ್ಟುಕೊಂಡಿದ್ದೇ ತಡ ಈ ಸವಾಲು ಹಲವು ಪ್ರಮುಖ ಪ್ರಶೆಗಳನ್ನು ಎತ್ತುತ್ತಿದೆ. ಇದರಲ್ಲಿ ರಂಗಭೂಮಿಯನ್ನು ನೋಡುವ ಬಗೆ ಹೇಗೆ ಎಂಬ ಪ್ರಶ್ನೆಯೂ ಒಂದು.
.
ಬೈರೇಗೌಡರ ಕಾರಣದಿಂದಾಗಿ ‘ಮಲೆಗಳಲ್ಲಿ ಮದುಮಗಳು’ ಕುರಿತ ಹತ್ತು ಹಲವು ವಿಮರ್ಶೆಯನ್ನು ಓದಬೇಕಾದ ಪ್ರಸಂಗ ಎದುರಾಯಿತು. ರಂಗಭೂಮಿಯ ಬಗ್ಗೆ ಏನನ್ನು ಓದುವುದೂ ಖುಷಿಯ ವಿಚಾರವಾದ ನನಗೆ ಇದು ಅಂತಹ ಮತ್ತೊಂದು ಸಂತಸದ ಕೆಲಸವಾಗಿತ್ತು. ನಾನು ರಂಗಭೂಮಿಯನ್ನು ಒಂದು ಕುತೂಹಲದ ಕಣ್ಣಿನಿಂದ ನೋಡುತ್ತಲೇ ಬಂದಿದ್ದೇನೆ. ಜೊತೆಗೆ ಮಾಧ್ಯಮದ ವಿದ್ಯಾರ್ಥಿಯಾಗಿ ನನಗೆ ರಂಗಭೂಮಿ ಮತ್ತು ಮಾಧ್ಯಮದ ಸಂಬಂಧ ಕಾಡುವ ವಸ್ತು.
.
ಬೈರೇಗೌಡರು ಕೈಗಿತ್ತ ಮದುಮಗಳು ವಿಮರ್ಶೆಯ ಕಟ್ಟನ್ನು (ಅಥವಾ ಕೆ ವಿ ನಾರಾಯಣ್ ಪರಿಭಾಷೆಯಲ್ಲಿ ಹೇಳುವುದಾದರೆ ‘ಕಂತೆ’ ಯನ್ನು) ಓದಿದಾಗ ನನಗೆ ಮೊದಲು ಎದ್ದು ಕಂಡಿದ್ದು ಸಾಹಿತ್ಯ ವಿಮರ್ಶೆ  ಎನ್ನುವುದು ಇನ್ನೂ ಜೀವಂತವಿದೆ ಎನ್ನುವುದು. ಈ ಸಂತೋಷದ ಬೆನ್ನಲ್ಲೇ ಅರಿವಾದದ್ದು ರಂಗ ವಿಮರ್ಶೆ  ಎನ್ನುವುದು ನಾಪತ್ತೆಯಾಗಿದೆ ಎನ್ನುವುದು. ಅಸಲಿಗೆ ಎಂದಾದರೂ ಇತ್ತೆ? ಎನ್ನುವ ಪ್ರಶ್ನೆಯೂ ನನ್ನ ಮುಂದಿದೆ. ನಾನು ಹಲವು ವರ್ಷಗಳ ಕಾಲ ರಂಗ ವಿಮರ್ಶೆಯೆಂಬ ಖುಷಿಯಲ್ಲಿ ಮಿಂದವನು. ನನಗೆ ರಂಗಭೂಮಿಯ ಮೂರು ವರ್ಷದ ಪದವಿ ತೆಕ್ಕೆಯಲ್ಲಿತ್ತು. ವರ್ಷಾನುಗಟ್ಟಲೆ ರಂಗ ವಿಮರ್ಶೆ  ಬರೆದರೂ ನನಗೆ ಈ ಅತೃಪ್ತಿ ಒಡಲ ಹಸಿವಿನಂತೆ ಉಳಿದೆ ಬಿಟ್ಟಿದೆ.ವಿಮರ್ಶೆ  ಎನ್ನುವುದು ಏನು? ಅದರ ತಯಾರಿ ಹೇಗೆ? ಅಥವಾ ಶಾಸ್ತ್ರೋಕ್ತ ತಯಾರಿ ಎನ್ನುವುದು ಬೇಕೇ?
ಎನ್ನುವ ಪ್ರಶ್ನೆಯನ್ನೂ ನಾನು ಮೇಲಿಂದ ಮೇಲೆ ಕೇಳಿಕೊಂಡಿದ್ದೇನೆ.
.
ನನಗೆ ರಂಗ ವಿಮರ್ಶೆ  ಮಾಡುವಾಗ ಇದ್ದ ದೊಡ್ಡ ವಿಶ್ವಾಸವೆಂದರೆ ಹವ್ಯಾಸಿ ರಂಗಭೂಮಿಯ ಬೆಳವಣಿಗೆಯ ಎಲ್ಲಾ ಹಂತಗಳಿಗೂ ನಾನು ನೋಡುಗನಾಗಿ ಸಾಕ್ಷಿಯಾಗಿದ್ದೆ ಎಂಬುದು. ಬಾಲಭವನದಲ್ಲಿ ಭಿನ್ನ ರಂಗಭೂಮಿಗೆ ಬೀಜ ಇತ್ತ ಪ್ರಸನ್ನರ ‘ ಗರೀಬಿ ಹಠಾವೋ’ ಅಥವಾ ಎನ್ ಎಸ್ ವೆಂಕಟರಾಮ್ ಅವರ ‘ಆನೆಮರಿ’ ನಾಟಕಗಳನ್ನು ನಾನು ನೋಡಿಲ್ಲವಾದರೂ ಈಗ ಸಂಸ ಕಲಾಕ್ಷೇತ್ರವಾಗಿ ಎದ್ದು ನಿಂತಿರುವ ಕಲಾಕ್ಷೇತ್ರದ ಹಿಂದಿನ ಬಯಲಿನಲ್ಲಿ ಎದ್ದು ನಿಂತ ತಾತ್ಕಾಲಿಕ ರಂಗ ಮಂದಿರದಲ್ಲಿ ಬಿ ವಿ ಕಾರಂತರ ನೇತೃತ್ವದಲ್ಲಿ ರಂಗಭೂಮಿ ಹಿಡಿಸಿಕೊಂಡ ಹುಚ್ಚಿನಿಂದ ಆರಂಭಿಸಿ ಇಲ್ಲಿಯವರೆಗೆ ಬಹುತೇಕ ನಾಟಕಗಳನ್ನು ನೋಡಿದ್ದೇನೆ. ಹಾಗಾಗಿ ಇಷ್ಟಂತೂ ಸತ್ಯ. ಹವ್ಯಾಸಿ ನಾಟಕಗಳ ಪೈಕಿಯೇ ಹೋಲಿಸಿ ನೋಡುವ, ರಂಗದ ಸಾಧ್ಯತೆಗಳನ್ನು ಬೆಳಕಿನಲ್ಲಿಟ್ಟು ನೋಡುವ, ಪ್ರಸಾಧನ, ಬೆಳಕು ಇತ್ಯಾದಿ ರಂಗ ನೇಪಥ್ಯದ ಸಂಗತಿಗಳಲ್ಲಿ ಯಾವುದು ಮುನ್ನೆಲೆಯಲ್ಲಿದೆ ಎಂಬುದನ್ನು ಹತ್ತು ಹಲವು ನಾಟಕಗಳ ಅನುಭವದಲ್ಲಿ ತೂಗಿ ನೋಡುವ ನೋಟವಂತೂ ದಕ್ಕಿದೆ. ಬಹುಶಃ ನಾನು  ಮಾತ್ರವಲ್ಲ ನನ್ನ ಜೊತೆಯೇ ನಾಟಕ ವಿಮರ್ಶೆ  ಮಾಡುತ್ತಿದ್ದ ಸಮಕಾಲೀನರ ಅನುಭವವೂ ಇದಕ್ಕಿಂತ ಭಿನ್ನವಾಗಿರುವ ಸಾಧ್ಯತೆಗಳಿಲ್ಲ. ರಂಗ ಚಟುವಟಿಕೆಯಲ್ಲೇ ತೊಡಗಿಸಿಕೊಂಡವರು ವಿಮರ್ಶೆ  ಬರೆದಾಗ ನೋಡುವ ಅನುಭವದ ಬದಲಿಗೆ ಒಂದು ಅಕ್ಕಿ ಕಾಳು ತೂಕ ಆಡುವ ಅನುಭವ ಅಲ್ಲಿ ಕಂಡಿದೆ ಎನ್ನುವಷ್ಟು ಮಾತ್ರ ವ್ಯತ್ಯಾಸ ಕಂಡಿದ್ದೇನೆ.
.
ರಂಗ ಶಿಕ್ಷಣದಲ್ಲಿ ರಂಗ ವಿಮರ್ಶೆ  ಒಂದು ಭಾಗವಾಗಿದೆಯೇ? ಎಂದು ಡಿಪ್ಲೋಮೋ, ಪದವಿ, ಸ್ನಾತಕೋತ್ತರ  ಪದವಿ, ರಂಗಾಯಣದ್ದೇ ದೂರ ಶಿಕ್ಷಣ ಡಿಪ್ಲೊಮೊಗಳೆಲ್ಲಾ ರೂಪುಗೊಂಡಿರುವಾಗ ಅದನ್ನು ಓದಿನ ಒಂದು ಭಾಗವಾಗಿ ಮಾಡಿದ್ದಾರೇನೋ, ಗೊತ್ತಿಲ್ಲ. ಆದರೆ ಬಿ ವಿ ರಾಜಾರಾಂ, ಮುಖ್ಯಮಂತ್ರಿ ಚಂದ್ರು ಆದಿಯಾಗಿ ನಾವೆಲ್ಲಾ ರಂಗಭೂಮಿ ಪದವಿಗೆ ಸಜ್ಜಾಗುತ್ತಿದ್ದಾಗ ಎಚ್ ಕೆ ರಂಗನಾಥ್, ಕ ವೆಂ ರಾಜಗೋಪಾಲ್ ಅವರು ಮುಖ್ಯಸ್ಥರಾಗಿದ್ದಾಗ, ಆರ್ ಟಿ ರಮ, ಸುಧೀಂಧ್ರ ಶರ್ಮ ಪಾಠ ಮಾಡುವಾಗಲೂ ಅದು ಓದಿನ ಭಾಗವಾಗಿರಲಿಲ್ಲ. ಅಷ್ಟೇ ಅಲ್ಲ, ಚರ್ಚೆಯ ವಸ್ತುವೂ ಆಗಿರಲಿಲ್ಲ.

ಹಾಗಾದರೆ ರಂಗ ವಿಮರ್ಶೆ  ಎನ್ನುವುದು ಎದ್ದು ನಿಂತಿದ್ದು ಎಲ್ಲಿಂದ? ಪತ್ರಿಕೆಗಳ ಒಡಲಲ್ಲಿ. ನಾನು ರಂಗ ವಿಮರ್ಶೆಗೆ ಕೈ ಇಡುವುದಕ್ಕೆ ಮಾಡಿಕೊಂಡ ತಯಾರಿಯೂ ಭಿನ್ನ. ನಾನು ಪಿಯುಸಿ ಓದುವ ದಿನಗಳಲ್ಲೇ ನೋಡುತ್ತಿದ್ದ ನಾಟಕಗಳನ್ನೆಲ್ಲಾ ಒಂದು ನೋಟ್ ಬುಕ್ ನಲ್ಲಿ ವಿಮರ್ಶೆಯಾಗಿಸುತ್ತಿದ್ದೆ. ವಿಮರ್ಶೆ  ಹೀಗೆ ಬರೆಯಬೇಕು ಎನ್ನುವುದಕ್ಕೆ ನಮಗಿದ್ದ ಮಾದರಿಯಾದರೂ ಏನು? ಎಗೈನ್ ಪತ್ರಿಕೆಗಳಲ್ಲಿ ಬರುತ್ತಿದ್ದ ವಿಮರ್ಶೆಗಳೇ. ಪತ್ರಿಕೆಗಳಲ್ಲಿ ಬರುತ್ತಿದ್ದ ವಿಮರ್ಶೆಯನ್ನು ಓದಿ ಅದರ ನೆರಳಲ್ಲೇ ನಮ್ಮ ವಿಮರ್ಶೆ  ರೂಪುಗೊಳ್ಳುತ್ತಿದ್ದ ದಿನಗಳು ಅವು.
.
ಪತ್ರಿಕಾಲಯದೊಳಗೆ ವಿಮರ್ಶೆಯ ಒಂದು ಭಿನ್ನ ಲೋಕವಿದೆ ಎಂದು ನಾನು ಭಾವಿಸಿದ್ದೆ. ನಾವು ಪತ್ರಿಕೆಗೆ ವಿಮರ್ಶೆ  ಬರೆಯುವ ವೇಳೆಗೆ ಜಿ ಎಸ್ ಸದಾಶಿವ, ಜಿ ಎನ್ ರಂಗನಾಥ ರಾವ್, ಬಿ ವಿ ವೈಕುಂಠರಾಜು  ವಿಮರ್ಶೆಯ ಅಂಗಳದಲ್ಲಿದ್ದರು. ಇವರು ಮಾಡುವ ವಿಮರ್ಶೆಯನ್ನು ರಂಗ ಲೋಕ ಕಾದಿದ್ದು ಓದುವ, ವಿಮರ್ಶೆ  ಇವರು ಬರೆಯಲಿ ಎಂದು ಹಾರೈಸುವ ಕಾಲ ಇತ್ತು. ಅವರು ವಿಮರ್ಶೆ  ಕಲಿತಿದ್ದು ಎಲ್ಲಿಂದ?. ಈ ಸಾಕಷ್ಟು ಓದಿದವರು, ಅನುವಾದ ಮಾಡಿದವರು, ಈ ಎಲ್ಲರೂ ಸ್ವತಹ ಲೇಖಕರು, ಅಷ್ಟೇ ಅಲ್ಲ ಎಷ್ಟೋ ನಾಟಕಗಳನ್ನು ಕನ್ನಡಕ್ಕೂ ತಂದವರು, ತಾವೇ ಬರೆದವರು. ಹಾಗಾಗಿ ಆ ಬರೆದ, ಓದಿದ ಅನುಭವ ಅವರ ಜೀವ ಜೀವಾಳವಾಗಿತ್ತು. ಆದರೆ ವಿಮರ್ಶೆ  ಎಂದರೆ ಅಷ್ಟೇನೆ?
.
ನಾನು ಏಣಗಿ ಬಾಳಪ್ಪನವರ ಸಂದರ್ಶನದಿಂದ ಆರಂಭಿಸಿ, ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ನ ಕಲಾ ಜಾಥಾ, ರವೀಂದ್ರ ಕಲಾಕ್ಷೇತ್ರದ ಹುಟ್ಟಿನ ಕಥೆ ಬರೆದು ಪತ್ರಿಕೆಗಳಿಗೆ ವಿಮರ್ಶೆ  ಬರೆಯುವ ವೇಳೆಗೆ ನನಗೆ ಇದ್ದದ್ದು ನಾಟಕ ನೋಡಿದ, ನಾಟಕದ ಗೆಳೆಯರ ಜೊತೆ ಒಡನಾಡಿದ ಅನುಭವ ಮಾತ್ರ. ಈ ಎರಡರ ಹುಮ್ಮಸ್ಸು, ಅದರ ಜೊತೆಗೆ ನಾವು ಪತ್ರಿಕೆಯಲ್ಲಿಯೇ ಇದ್ದ ಕಾರಣ ಅಲ್ಲಿ ವಿಮರ್ಶೆ  ಬರೆದರೆ ಒಂದಿಷ್ಟು ಜಾಗ ಇದ್ದೇ ಇದೆ ಎನ್ನುವ ಕಾರಣಕ್ಕೂ ನಾವು ಮೇಲಿಂದ ಮೇಲೆ ಬರೆದೆವು.
.
ಆದರೆ ಪತ್ರಿಕೆಯ ಒಳಗೂ ಅಷ್ಟೇ ರಂಗಭೂಮಿ ವಿಮರ್ಶಕರು ಅಂತೇನಿಲ್ಲ. ಇಂದು ಪತ್ರಿಕೆಯೊಳಗೆ ಕೆಲಸ ಮಾಡುತ್ತಾ ವಿಮರ್ಶೆಯನ್ನೂ ಬರೆಯುತ್ತಿರುವ ಯಾರನ್ನಾದರೂ ಕೇಳಿ ನೋಡಿ. ಅವರ ಪಾಡು ಅವರಿಗೆ ಗೊತ್ತು. ತಮ್ಮ ರಜಾದಿನದಂದೋ ಅಥವಾ ತಮ್ಮ ಎಲ್ಲಾ ಕೆಲಸವನ್ನೂ ಮುಗಿಸಿ ಓಡಿ ಹೋಗಿ ನಾಟಕ ನೋಡುವ, ವಿಮರ್ಶೆ  ಬರೆಯುವ ಪ್ರೋತ್ಸಾಹವೇ ಇಲ್ಲದ ವಾತಾವರಣವೇ ಇದೆ. ಇಂದು ಪತ್ರಿಕೆಗಳ್ಲಲಿ ವಿಮರ್ಶೆ  ಎನ್ನುವುದು ಇನ್ನೂ ಉಳಿದುಕೊಂಡಿದ್ದರೆ ತಮ್ಮ ವೈಯಕ್ತಿಕ ಆಸಕ್ತಿಯಿಂದ ನಾಟಕ ನೋಡುತ್ತಿರುವ, ಅದರ ಬಗ್ಗೆ ಬರೆಯುತ್ತಿರುವುದರಿಂದ ಮಾತ್ರವೇ ಹೊರತು ಪತ್ರಿಕೆಗಳಿಗೆ ಸಿನೆಮಾದಂತೆ ನಾಟಕ ವಿಮರ್ಶೆಗೆ ಅನಿವಾರ್ಯವಾದ ಅಂಕಣವೇನಲ್ಲ.
.
ಹೀಗಾಗಿಯೇ ಅಂದಿನಿಂದ ಇಂದಿನವರೆಗೂ ನೋಡಿದರೆ ವಿಮರ್ಶೆ  ಆರಕ್ಕೇರಿಲ್ಲ, ಮೂರಕ್ಕೆ ಇಳಿದಲ್ಲ. ರಂಗ ವಿಮರ್ಶೆ  ಎನ್ನುವುದು ಈಗಿನ ಟ್ರೆಂಡ್ ಆಗಿರುವ ಪುಸ್ತಕ ಪರಿಚಯದ ರೀತಿ ಪ್ರಸ್ತಕ ಓದಲು, ಕೊಳ್ಳಲು ಒಂದಿಷ್ಟು ಪ್ರಚಾರ ಒದಗಿಸುವ ಕಾಲುದಾರಿಯಂತೆ. ನಾಟಕ ವಿಮರ್ಶೆಯೂ ತಿಂಗಳ ಕಾಲ ನಡೆಸಿದ ಒಂದು ಪ್ರಾಮಾಣಿಕ ಶ್ರಮಕ್ಕೆ ಸಿಕ್ಕುವ ಒಂದು ಪ್ರಚಾರ, ತಂಡದವರಲ್ಲದ ಇನ್ನೊಬ್ಬರ ನೋಟದ ಪ್ರಯೋಜನ, ಇನ್ನೊಂದು ಪ್ರದರ್ಶನ ನಡೆದಲ್ಲಿ ಅದಕ್ಕೆ ಒಂದಿಷ್ಟು ನೋಡುಗರನ್ನು ದಕ್ಕಿಸಿಕೊಡುವ ದಾರಿಯಾಗಿ ಉಳಿದುಬಿಟ್ಟಿದೆ.
.
ಹೀಗೆ ಈ ಎಲ್ಲವನ್ನೂ ಯೋಚಿಸಲು ಅನುವು ಮಾಡಿಕೊಟ್ಟದ್ದು ‘ಮಲೆಗಳಲ್ಲಿ ಮದುಮಗಳು’. ಮಲೆಗಳ್ಲಲಿ ಮದುಮಗಳು ರಂಗ ಪ್ರಯೋಗ ಎಷ್ಟೊಂದನ್ನು ಬದಲು ಮಾಡಿತು. ಕಾದಂಬರಿಯನ್ನೇ ಬದಲು ಮಾಡಿತು, ನಾಟಕ ನೋಡುವ ರೀತಿಯನ್ನು ಬದಲು ಮಾಡಿತು, ನಾಟಕ ಆಡುವವರನ್ನೂ ಬದಲು ಮಾಡಿತು, ರಂಗ ಸಜ್ಜಿಕೆ ಎನ್ನುವುದಕ್ಕೆ ಹೊಸ ಆಯಾಮ ನೀಡಿತು. ಒಟ್ಟಾರೆ ನಾಟಕ ಎನ್ನುವುದಕ್ಕೆ ಇದುವರೆಗೆ ಇದ್ದ ಅರ್ಥವನ್ನೇ ಬದಲಿಸಿ ಹಾಕಿತು. ಹಾಗಾಗಿ ಇದರೊಂದಿಗೆ ನಾಟಕದ ವಿಮರ್ಶೆಯನ್ನೂ ಬದಲಿಸಿ ಹಾಕುತ್ತದೆಯೇ ಎನ್ನುವ ಕುತೂಹಲ ನನಗಿತ್ತು. ರಂಗಭೂಮಿಯನ್ನು ಬದಲಿಸಲು ಹರಿವ ನದಿಗೆ ಮೈಯೆಲ್ಲಾ ಕಾಲು ಎನ್ನುವಂತೆ ಅದು ಇಲ್ಲಿಯವರೆಗೆ ನಡೆದಾಡಿದ ಮೈಲಿಗಲ್ಲುಗಳು ಸಹಕಾರಿಯಾಗಿವೆ. ಆದರೆ ವಿಮರ್ಶೆಯನ್ನು ಗಂಭೀರವಾಗಿ ನೋಡಿದ, ಅದನ್ನು ಪ್ರಯೋಗಕ್ಕೆ ಒಡ್ಡಿದ, ಕಾಲ ಕಾಲಕ್ಕೆ ಮಥನಕ್ಕೆ ಈಡು ಮಾಡಿದ ಉದಾಹರಣೆ ತುಂಬಾ ಕಡಿಮೆ. ಹಾಗಾಗಿಯೇ ಈ ಎಲ್ಲಾ ಪರಿಣಾಮಗಳು ಮದುಮಗಳ ಬಗ್ಗೆ ಏರ್ಪಡಿಸಿದ ನಾಟಕ ವಿಮರ್ಶೆಯಲ್ಲೂ ಎದ್ದು ಕಂಡಿದೆ.
.
ನನ್ನ ಕೈಗೆ ಬಂದ ವಿಮರ್ಶೆಗಳ ಪೈಕಿ ಚೆನ್ನಾಗಿದೆ, ಭಿನ್ನವಾಗಿದೆ ಎಂದು ಒಂದು ಓದಿಗೆ ಅನಿಸಿಬಿಡುವ ವಿಮರ್ಶೆಗಳು ಆಳದಲ್ಲಿ ರಂಗ ವಿಮರ್ಶೆಗಿಂತ ಹೆಚ್ಚಾಗಿ ಸಾಹಿತ್ಯ ವಿಮರ್ಶೆಯಾಗಿದೆ. ಹಲವು ಕಡೆ ಇದು ಕೃತಿ ಮತ್ತು ಪ್ರಯೋಗವನ್ನು ಎಡ ಬಲದಲ್ಲಿಟ್ಟು ತೂಗಿ ನೋಡುವ ವಿಮರ್ಶೆಯಾಗಿದೆ. ಇನ್ನು ಕೆಲವು ಕಾದಂಬರಿ ಓದಿ ತಾವು ಮನೋರಂಗದಲ್ಲಿ ರೂಪಿಸಿಕೊಂಡದ್ದನ್ನು ರಂಗಾಯಣದ ರಂಗದಲ್ಲಿ ಹುಡುಕುವ ಪ್ರಯತ್ನವಾಗಿದೆ.
.
ಒಂದೆರಡು ಸೋಮಾರಿ ವಿಮರ್ಶೆಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲರೂ ಸಾಕಷ್ಟು ಕಾಳಜಿಯಿಂದ ವಿಮರ್ಶೆ ಗೆ ತೊಡಗಿಸಿಕೊಂಡಿದ್ದಾರೆ ಎಂಬುದಂತೂ ಸ್ಪಷ್ಟ. ನಾಟಕದ ಬಗ್ಗೆ ಇರುವ ರಂಗಪತ್ರವನ್ನು ಓದಿ, ಕಾದಂಬರಿಯನ್ನು ಇನ್ನೊಮ್ಮೆ ಓದಿ, ಈ ನಾಟಕದ ಬಗ್ಗೆ ಬಂದಿರುವ ವಿಮರ್ಶೆಯನ್ನೂ ಕಣ್ಣಾಡಿಸಿ ಹೀಗೆ ಸಾಕಷ್ಟು ಹೋಂ ವರ್ಕ್   ಅವರ ವಿಮರ್ಶೆಗಳಲ್ಲಿ ಎದ್ದು ಕಾಣುತ್ತದೆ. ಪುಷ್ಪಲತಾ ಹೆಚ್ ಎನ್, ಭೈರಪ್ಪ ಎಂ, ಸಂದೇಶ್ ಎಚ್ ರತ್ನಪುರಿ, ಅಮರನಾಥ್ ಎಂ ಬರಹಗಳು ಇದಕ್ಕೆ ಸಾಕ್ಷಿ. ಇದರೊಂದಿಗೆ ಹುಮ್ಮಸ್ಸಿನಿಂದ ವಿಮರ್ಶೆ  ಬರೆದವರು ರಾಶಿ ಎಂ ಆರ್, ನವೀನ್ ಕುಮಾರ್ ಎನ್, ಹೇಮಲತಾ ಪಿ ಎನ್ ಇದರಿಂದ ಒಂದಂತೂ ಸ್ಪಷ್ಟ ನಾಟಕವನ್ನು ವಿಮರ್ಶಿಸಲು ಬೇಕಾದ ಮನಸ್ಸುಗಳಿವೆ. ಅದಕ್ಕೆ ದಾರಿ ಹುಡುಕಿ ಕೊಡುವ ರಂಗವಿಮರ್ಶಕರನ್ನು ರೂಪಿಸುವ ಆ ಮೂಲಕ ರಂಗಭೂಮಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ.
.
ಹೀಗೆ ಹೇಳುವಾಗ ನನಗೆ ಬಸವಲಿಂಗಯ್ಯ ವಾರ್ತಾ  ಇಲಾಖೆಗಾಗಿ ರೂಪಿಸಿದ ‘ಮನುಷ್ಯ ಜಾತಿ ತಾನೊಂದೆ ವಲಂ’ ಭಿನ್ನ ಪ್ರಯೋಗವೂ ಕಣ್ಣ ಮುಂದಿದೆ. ಕೆ ವಿ ನಾರಾಯಣ್ ಹೇಳುವಂತೆ ’30 ಡಿ ಗ್ರಿ ಅಳತೆಯಲ್ಲಿ ನಡೆಯುವ ನಾಟಕಕ್ಕೂ 180 ಡಿಗ್ರಿ ಅಳತೆಯಲ್ಲಿ ನಡೆಯುವ ನಾಟಕಕ್ಕೂ’ ಒಂದೇ ವಿಮರ್ಶೆ  ಒಗ್ಗುವುದಾದರೂ ಹೇಗೆ? ಸುಖಾಸುಮ್ಮನೆ ‘ಅವಳ ಅಂಗಿ ಇವಳಿಗಿಟ್ಟು ನೋಡಬಯಸಿದೆ’ ಎನ್ನುವಂತೆ ನೋಡಬಯಸುತ್ತಾ ಕೂತರೆ ಮಾಧ್ಯಮಗಳು ರಂಗಭೂಮಿಗೆ ತಿರುವು ನೀಡಲು ಸಾಧ್ಯವೇ ಇಲ್ಲ. ಬಸವಲಿಂಗಯ್ಯನವರ ನಾಟಕಗಳು ಹೊಸದೇ ರಂಗ ಪರಿಭಾಷೆಗೆ ಒತ್ತಾಯ ಮಾಡುತ್ತಿವೆ. ಅವರ ಪ್ರಯೋಗಗಳು ಈವರೆಗಿನ ರಂಗಕಲ್ಪನೆಯನ್ನು ಮೀರುವ ಕಾರಣದಿಂದಾಗಿಯೇ ಅವರ ನಾಟಕಗಳನ್ನು ವಿಮರ್ಶಿಸಲೂ ಹೊಸ ತಯಾರಿಯೇ ಬೇಕು. ಹೀಗೆನ್ನುವಾಗ ತೇಜಸ್ವಿ ಅವರ ಕೈತಿಗಳ ಬಗ್ಗೆ ಬರೆಯುತ್ತಾ ಚಂದ್ರಶೇಖರ ನಂಗಲಿ ಅವರು ಆಡಿದ ಮಾತು ನೆನಪಿಗೆ ಬರುತ್ತಿದೆ. ತೇಜಸ್ವಿ ಸಾಹಿತ್ಯವನ್ನು ವಿಮರ್ಶಿಸಲು ಬೇಕಾದ ಪರಿಕರಗಳು ಆಗಿನ ವಿಮರ್ಶಕರ ಬಳಿ ಇರಲಿಲ್ಲ ಎನ್ನುತ್ತಾರೆ. ಹಾಗೆಯೇ ಬಸವಲಿಂಗಯ್ಯನವರ ನಾಟಕವನ್ನು ಒರೆಗೆ ಹಚ್ಚಿ ನೋಡುವ ಪರಿಕರಗಳೂ ಸಹಾ ನಮ್ಮ ಬಳಿ ಇಲ್ಲ.
.
ಬಸವಲಿಂಗಯ್ಯ ನಿರ್ದೇಶಿಸಿದ ‘ಸಿಂಗಿರಾಜ ಸಂಪಾದನೆ’ ನಾಟಕ ನೆನಪಿಗೆ ಬರುತ್ತಿದೆ. ಎಚ್ ಎಸ್ ಶಿವಪ್ರಕಾಶ್ ಅವರ ಕವಿತೆಯನ್ನು ರಂಗಕೇರಿಸಲು ಬಸವಲಿಂಗಯ್ಯ ಆ ಕಾಲದಲ್ಲೇ ಮುಂದಾಗಿದ್ದರು. ಈ ನಾಟಕ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಗಿತ್ತು. ಆಗ ನಾನೂ ಸಹಾ ವಿಮರ್ಶೆಯ ಹೊಸ ಭಾಷೆಗಾಗಿ ತಡಕಾಡುತ್ತಿದ್ದವನು. ಹಾಗಾಗಿಯೇ ನಾಟಕವಾದ ಈ ಕವಿತೆಯನ್ನು ವಿಮರ್ಶಿಸಲು ಹೊಸ ಭಾಷೆ ಹುಡುಕಿಕೊಂಡೆ. ಅದು ‘ಅನ್ವೇಷಣೆ’ ಯಲ್ಲಿ ಪ್ರಕಟವಾಯಿತು. ನನ್ನ ಪ್ರಕಾರ ಬಸವಲಿಂಗಯ್ಯನವರು ಯಾವುದನ್ನು ರಂಗದಲ್ಲಿ ಹುಡುಕುತ್ತಿದ್ದರೋ ಅದನ್ನು ನಾನು ರಂಗ ವಿಮರ್ಶೆಯಲ್ಲಿ  ಹುಡುಕುತ್ತಿದ್ದೆ. ಇಬ್ಬರೂ ಅಂದಿನವರೆಗಿದ್ದ ಸಿದ್ಧ ಮಾದರಿಗಳನ್ನು ಮುರಿದು ಕಟ್ಟುವ ಉತ್ಸಾಹದಲ್ಲಿದ್ದೆವು. ಆದರೆ ಕಲಾಕ್ಷೇತ್ರದಲ್ಲಿ ಸಿಕ್ಕ ಶೂದ್ರ ಶ್ರೀನಿವಾಸ್ ನಿನ್ನ ವಿಮರ್ಶೆ  ಕವಿತೆಯ ಬಗ್ಗೆ ಯಾಕೆ ಮಾತನಾಡಬೇಕು, ಪ್ರಯೊಗದ ಬಗ್ಗೆ ಹೇಳಿದ್ದರೆ ಸಾಕಾಗಿತ್ತು ಎಂದರು. ಒಂದು ಕ್ಷಣ ಇದು ಹೊಸದು ಹುಡುಕುವುದಕ್ಕೆ ಒದಗಿದ ಹಿನ್ನೆಡೆ. ಅಥವಾ ನಾವು ಹೊಸ ವಿಮರ್ಶೆ ಬರೆದಿದ್ದರೆ ಮಾತ್ರ ಸಾಕಿರಲಿಲ್ಲ ಅದಕ್ಕೆ ಹೊಸ ಮನಸ್ಸನ್ನೂ ರೂಪಿಸಬೇಕಾದ ಅಗತ್ಯವಿತ್ತು.
.
ನಾನು ಇಲ್ಲಿನ ವಿಮರ್ಶೆಯ ಬಗ್ಗೆ ವಿಮರ್ಶೆ  ಮಾಡಬೇಕಿತ್ತೇನೋ, ಗೊತ್ತಿಲ್ಲ. ಆದರೆ ಈ ವಿಮರ್ಶೆಗಳು ನನ್ನೊಳಗೆ ಹುಟ್ಟಿಸಿದ ಪ್ರಶ್ನೆಗಳನ್ನಂತೂ ಮುಂದಿಟ್ಟಿದ್ದೇನೆ. ಮಲೆಗಳಲ್ಲಿ ಮದುಮಗಳ ಬಗ್ಗೆ ಉತ್ಸಾಹಿ ತರುಣರು ಬರೆದ ವಿಮರ್ಶೆ  ಓದುವಾಗ ಇಲ್ಲಿ ಆ ರೀತಿಯ ಹೊಸತೇನೋ ಇರುತ್ತದೆ ಎಂಬ ಭರವಸೆಯಿತ್ತು. ಎಲ್ಲಾ ಹೊಸತುಗಳ ನಾಟಕ ಹೊಸದೇ ವಿಮರ್ಶೆ  ಮೂಡಿಸುತ್ತದೆ ಎಂಬ ಆಶಯ. ಆದರೆ ಆ ಭರವಸೆ ನಿಜವಾಗಿಲ್ಲ. ಆದರೆ ಒಂದಷ್ಟು ಬೆಳಕಿನ ಬೀಜಗಳಂತೂ ಈ ವಿಮರ್ಶೆಯಲ್ಲಿ ಕಂಡಿದೆ. ಇಲ್ಲಿ ವಿಮರ್ಶೆಗೆ ತೊಡಗಿಕೊಂಡವರಿಗೆ ಹುಮ್ಮಸ್ಸಿದೆ. ಅವರಿಗೆ ಹೊಸ ದಾರಿಗಳನ್ನು ತೋರುವವರಿದ್ದರೆ ಹೊಸ ವ್ಯಾಕರಣವನ್ನೂ ಕಟ್ಟಿಯಾರು.
 .
ಜಿ  ಎನ್ ಮೋಹನ್
.
ಯಾರೂ ಮುಖ್ಯರಲ್ಲ
.
ಪುಸ್ತಕದಿಂದ